ಶ್ರೀ ಬಸವಣ್ಣನವರು ತಮ್ಮ ತಲೆಯ ಮೇಲೆ ಇಟ್ಟುಕೊಂಡು ವಾಪಸ್ಸು ನೀಡಿದ ಆ ಪವಿತ್ರ ಪಾದುಕೆಗಳನ್ನು ಶ್ರೀ ಹರಳಯ್ಯನವರು ಮನೆಗೆ ತೆಗೆದುಕೊಂಡು ಹೋಗುವಾಗ ಎದುರಾದ ಶ್ರೀ ಮಧುವರಸ ಮತ್ತಿತರರು ಗೇಲಿ ಮಾಡಿದ್ದರಿಂದ ಅವರಿಗೆ ಚರ್ಮದ ತುರಿಕೆ ಉಂಟಾಗಿ ಪರಿತಪಿಸುವ ಸಂಧರ್ಭ ಬಂದಾಗ ಕೊನೆಗೆ ಶ್ರೀ ಹರಳಯ್ಯನವರ ಮನೆಗೆ ಹೋಗಿ ಪಾದುಕೆಗಳ ಚರ್ಮ ಹದ ಮಾಡಿದ ನೀರನ್ನು ಸಿಂಪಡಿಸಿಕೊಂಡಾಗ ಚರ್ಮ ತುರಿಕೆಯು ಮಾಯವಾಗಿದ್ದನ್ನು ತಿಳಿಯಬಹುದಾಗಿದೆ. ಅಂದರೆ ಶತಶತಮಾನಗಳಿಂದಲೂ ಚರ್ಮಕೈಗಾರಿಕೆಯನ್ನು ನಡೆಸಿಕೊಂಡು ಬಂದಿದ್ದು ಇದು ಒಂದು ಪವಿತ್ರ ವೃತ್ತಿ ಎಂದು ಪರಿಗಣಿಸಲಾಗಿದೆ. ಇಂದಿಗೂ ಸಹ ಈ ವೃತ್ತಿ ಪ್ರಸ್ತುತವಾಗಿದ್ದು, ಬೃಹದಾಕಾರವಾಗಿ ಬೆಳೆದಿರುತ್ತದೆ.
ಈ ವೃತ್ತಿಯಲ್ಲೂ ಸಹ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಚರ್ಮ ಸುಲಿಯುವ ವೃತ್ತಿ, ಚರ್ಮ ಹದ ಮಾಡುವ ವೃತ್ತಿ ಮತ್ತು ಪಾದರಕ್ಷೆಗಳನ್ನು ತಯಾರಿಸುವ ವೃತ್ತಿಯನ್ನು ಬೇರೆ ಬೇರೆ ಉಪಜಾತಿಯವರು ನಿರ್ವಹಿಸುತ್ತಿದ್ದು, ಚರ್ಮ ಸುಲಿಯುವವರನ್ನು ಮಾದಿಗ ಎಂದು, ಚರ್ಮ ಹದ ಮಾಡುವವರನ್ನು ಡೋರ ಎಂದು, ಪಾದರಕ್ಷೆ ತಯಾರಿಸುವವರನ್ನು ಸಮಗಾರ/ಮೋಚಿ/ಮಚಗಾರರೆಂದು ಕರೆಯಲಾಗುವುದು. ದಕ್ಷಿಣ ಕರ್ನಾಟಕದಲ್ಲಿ ಮಾದಿಗ ಸಮುದಾಯವೆಂದು ಕರೆಯಲಾಗುವುದು. ಈ ಎಲ್ಲಾ ಉಪಜಾತಿಗಳಿಗೆ ಸೇರಿದವರು ಸಹ ಚರ್ಮ ಕುಶಲಕರ್ಮಿಗಳಾಗಿರುತ್ತಾರೆ. ಈ ವೃತ್ತಿಯು ಶತ ಶತಮಾನಗಳಿಂದ ರೂಢಿಯಲ್ಲಿದ್ದು, ಚರ್ಮೋದ್ಯಮವು ಬೃಹದಾಕಾರವಾಗಿ ಬೆಳೆದು ಭಾರತ ದೇಶದ ಆರ್ಥಿಕ ವ್ಯವಸ್ಥೆಗೆ ಪ್ರಮುಖ ಕೊಡುಗೆ ನೀಡುತ್ತಿದೆ ಹಾಗೂ ರಫ್ತಿನಿಂದ ದೇಶಕ್ಕೆ ಆದಾಯ ತರುವ ಉದ್ದಿಮೆಗಳಲ್ಲಿ ಚರ್ಮೋದ್ಯಮವು ಪ್ರಮುಖ ಪಾತ್ರ ವಹಿಸುತ್ತಿದೆ. ಈ ಕೈಗಾರಿಕೆಯು ಹೆಚ್ಚಿನ ಉದ್ಯೋಗ ಸೃಷ್ಠಿಸುವಲ್ಲಿ ಸಫಲವಾಗಿದ್ದು, ಸಮಾಜದಲ್ಲಿನ ಅತೀ ಹಿಂದುಳಿದ ವರ್ಗದವರಿಗೆ ಮತ್ತು ಹೆಚ್ಚಿನ ರೀತಿಯಲ್ಲಿ ಮಹಿಳೆಯರಿಗೆ ಉದ್ಯೋಗ ಒದಗಿಸುತ್ತಿದೆ.