ನಮ್ಮ ಬಗ್ಗೆ

ಸಂಕ್ಷಿಪ್ತ ಪರಿಚಯ

ಕರ್ನಾಟಕ ಸರ್ಕಾರವು ರಾಜ್ಯದಲ್ಲಿನ ಚರ್ಮೋದ್ಯಮದ ಬೆಳವಣಿಗೆ ಮತ್ತು ಪರಿಶಿಷ್ಟ ಜಾತಿಗೆ ಸೇರಿದ ಚರ್ಮ ಕುಶಲಕರ್ಮಿಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವ ಉದ್ದೇಶದಿಂದ ಡಾ. ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮವನ್ನು 1976 ರಲ್ಲಿ ಸ್ಥಾಪಿಸಿತು. ಈ ನಿಗಮವು ಲಿಡ್‍ಕರ್ ಬ್ರಾಂಡ್‍ನೊಂದಿಗೆ ಪ್ರಚಲಿತದಲ್ಲಿರುತ್ತದೆ

 

ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಚರ್ಮ ಕುಶಲಕರ್ಮಿಗಳು ಇಂದಿಗೂ ಶೂ, ಪಾದರಕ್ಷೆ ಮತ್ತಿತರೆ ಚರ್ಮ ವಸ್ತುಗಳ ತಯಾರಿಕೆಯಲ್ಲಿ ತೊಡಗಿದ್ದು, ಚರ್ಮ ಕರಕುಶಲತೆಗೆ ಹೆಸರುವಾಸಿಯಾಗಿದ್ದಾರೆ. ಚರ್ಮ ಕುಶಲಕರ್ಮಿಗಳು ಆರ್ಥಿಕವಾಗಿ ದುರ್ಬಲರಾಗಿದ್ದು, ಸಮಾಜದ ಕಟ್ಟಕಡೆಯ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಖಾಸಗಿ ಉದ್ದಿಮೆದಾರರು/ಡೀಲರ್ಸ್‍ಗಳಿಂದ ಶೋಷಣೆಗೆ ಒಳಪಡುತಿದ್ದಾರೆ. ಅವರು ತಯಾರಿಸಿದ ಉತ್ಪನ್ನಗಳಿಗೆ ನ್ಯಾಯಯುತವಾದ ಬೆಲೆ ದೊರೆಯದೆ ಮತ್ತು ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಗೌರವಯುತವಾದ ಜೀವನ ನಡೆಸಲು ಪರದಾಡುವ ಸ್ಥಿತಿಯಲ್ಲಿದ್ದಾರೆ. ಇಂದಿಗೂ ಸಹ ಬಹುತೇಕ ಚರ್ಮ ಕುಶಲಕರ್ಮಿಗಳು ಬೀದಿ ಬದಿ ಕುಳಿತು ಬಿಸಿಲು ಚಳಿ ಎನ್ನದೆ ದುರಸ್ಥಿ ಕೆಲಸಗಳಲ್ಲಿ ತೊಡಗಿರುತ್ತಾರೆ.

ಕರ್ನಾಟಕ ಸರ್ಕಾರವು ಇಂತಹ ಶೋಷಣೆಗೊಳಗಾದ ಹಾಗೂ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವ ಚರ್ಮ ಕುಶಲಕರ್ಮಿಗಳ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು 1976 ರಲ್ಲಿ ದಿವಂಗತ ಸನ್ಮಾನ್ಯ ಶ್ರೀ ದೇವರಾಜ ಅರಸುರವರು ಮುಖ್ಯ ಮಂತ್ರಿಗಳಾಗಿದ್ದ ಸಮಯದಲ್ಲಿ ಕರ್ನಾಟಕ ಚರ್ಮಕೈಗಾರಿಕಾ ಅಭಿವೃದ್ಧಿ ನಿಗಮವನ್ನು ಸ್ಥಾಪನೆ ಮಾಡುವ ಮೂಲಕ ಹಲವು ಯೋಜನೆಗಳನ್ನು ಹಮ್ಮಿಕೊಂಡು ಅನುಷ್ಟಾನಗೊಳಿಸಲಾಗುತ್ತಿದೆ ಹಾಗೂ ಮೇ 2010 ರಿಂದ ಜಾರಿಗೆ ಬರುವಂತೆ ನಿಗಮದ ಹೆಸರನ್ನು ಡಾ|| ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ಎಂದು ಮರುನಾಮಕರಣ ಮಾಡಲಾಯಿತು. ಈ ನಿಗಮವು ಪ್ರಾರಂಭವಾದಗಿನಿಂದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ದಿನಾಂಕ: 15-12-2011 ರಿಂದ ಸಮಾಜ ಕಲ್ಯಾಣ ಇಲಾಖೆಯ ಆಡಳಿತ ವ್ಯಾಪ್ತಿಗೆ ವರ್ಗಾಯಿಸಲ್ಪಟ್ಟಿದೆ. ಅಂದಿನಿಂದಲೂ ಸಮಾಜ ಕಲ್ಯಾಣ ಇಲಾಖೆಯಿಂದ ಹೆಚ್ಚಿನ ಅನುದಾನ ಒದಗಿಸಲಾಗುತ್ತಿದ್ದು ಚರ್ಮಕುಶಲಕರ್ಮಿಗಳ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಹಿಂದಿನ ಯೋಜನೆಗಳ ಜೊತೆಗೆ ಕೆಲವು ಹೊಸ ಯೋಜನೆಗಳನ್ನು ರೂಪಿಸಿ ಅನುಷ್ಟಾನಗೊಳಿಸಲಾಗುತ್ತಿದೆ.

 

ಅಭಿವೃದ್ಧಿ ಕಾರ್ಯಕ್ರಮಗಳ ಜೊತೆಗೆ ನಿಗಮವು ವಾಣಿಜ್ಯ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದು ರಾಜ್ಯಾದ್ಯಂತ 15 ಲಿಡ್‍ಕರ್ ಮಾರಾಟ ಮಳಿಗೆಗಳ ಮೂಲಕ/ಸರ್ಕಾರಿ ಇಲಾಖೆ/ ಸಂಸ್ಥೆಗಳಿಗೆ/ಖಾಸಗಿ ಸಂಸ್ಥೆಗಳಿಗೆ ಸಗಟು ಮಾರಾಟ ಮಾಡುವ ಮೂಲಕ/ ವಿವಿಧ ಸ್ಥಳಗಳಲ್ಲಿ ವಸ್ತು ಪ್ರದರ್ಶನ ಮತ್ತು ಮಾರಾಟ ಆಯೋಜಿಸುವ ಮೂಲಕ ಚರ್ಮ ಕುಶಲಕರ್ಮಿಗಳು ತಯಾರಿಸುವ ಉತ್ಪನ್ನಗಳನ್ನು ಲಿಡ್‍ಕರ್ ಬ್ರಾಂಡ್‍ನಡಿ ಮಾರಾಟ ಮಾಡಲಾಗುತ್ತಿದೆ. ಅಲ್ಲದೇ ಚರ್ಮೋದ್ಯಮದಲ್ಲಿ ತೊಡಗಿರುವ ಸಣ್ಣ ಪ್ರಮಾಣದ ಘಟಕಗಳು ತಯಾರಿಸುವ ಇತರೆ ಚರ್ಮದ ಉತ್ಪನ್ನಗಳನ್ನು ಸಹ ಮಾರಾಟ ಮಾಡಲಾಗುತ್ತಿದೆ. ಈ ಮೂಲಕ ಚರ್ಮ ಕುಶಲಕರ್ಮಿಗಳು ಮತ್ತು ಸಣ್ಣ ಪ್ರಮಾಣದ ಘಟಕಗಳು ತಯಾರಿಸುವ ಚರ್ಮೋತ್ಪನ್ನಗಳಿಗೆ ಮಾರುಕಟ್ಟೆ ಸಹಾಯವನ್ನು ಒದಗಿಸಲಾಗುತ್ತಿದೆ.

ಚರ್ಮ ಕುಶಲಕರ್ಮಿಗಳ/ಚರ್ಮಗಾರಿಕೆಯ ಇತಿಹಾಸ

ಚರ್ಮಕೈಗಾರಿಕೆಯು ತನ್ನದೇ ಆದ ಇತಿಹಾಸ ಹೊಂದಿದ್ದು, 12 ನೇ ಶತಮಾನದಲ್ಲಿ ಮಹಾಶರಣ ಹರಳಯ್ಯ ದಂಪತಿಗಳು ಶಿವನ ಪರಮ ಭಕ್ತರಾಗಿದ್ದರು. ಇವರು ಬಿಜ್ಜಳನ ಆಸ್ಥಾನದಲ್ಲಿ ಮಹಾಮಂತ್ರಿಗಳಾಗಿ ಸಮಾಜ ಸುಧಾರಣೆಗಾಗಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಲು ಪ್ರಯತ್ನಿಸುತಿದ್ದ ಶ್ರೀ ಬಸವಣ್ಣನವರ ಅನುಯಾಯಿಗಳಾಗಿದ್ದರು. ಶ್ರೀ ಬಸವಣ್ಣನವರು ಅಸ್ಪøಶ್ಯತೆಯನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಶ್ರೀ ಹರಳಯ್ಯನವರ ಮನೆಗೆ ಭೇಟಿ ನೀಡಿ ಪೂಜಾಕೈಂಕರ್ಯಗಳನ್ನು ಮಾಡಿ ಪ್ರಸಾದ ಸೇವಿಸಿ ಹೊರಡುವ ಸಮಯದಲ್ಲಿ ಶ್ರೀ ಹರಳಯ್ಯನವರು ಶರಣುಎಂದು ನಮಸ್ಕರಿಸಿದಾಗ ಶ್ರೀ ಬಸವಣ್ಣನವರು ಶರಣು ಶರಣಾರ್ಥಿ ಎಂದು ಉಚ್ಛರಿಸಿದಾಗ ಶ್ರೀ ಹರಳಯ್ಯನವರು ಮೂಕವಿಸ್ಮಿತರಾಗಿ ಶ್ರೀ ಬಸವಣ್ಣನವರು ಒಬ್ಬ ಅಸ್ಪøಷ್ಯ ಚರ್ಮಕಾರರ ಮೇಲೆ ತೋರಿಸಿದ ಔದಾರ್ಯಕ್ಕಾಗಿ ಆಶ್ಚರ್ಯ ಚಕಿತರಾದರು. ಇದರ ಋಣ ತೀರಿಸಲು ತೀರ್ಮಾನಿಸಿ ಶ್ರೀ ಹರಳಯ್ಯನವರ ಬಲ ತೊಡೆಯ ಹಾಗೂ ಪತ್ನಿ ಕಲ್ಯಾಣಮ್ಮನವರ ಎಡತೊಡೆಯ ಚರ್ಮವನ್ನು ತೆಗೆದು ಪಾದುಕೆಗಳನ್ನು ತಯಾರಿಸಿ ಶ್ರೀ ಬಸವಣ್ಣನವರಿಗೆ ಕೊಟ್ಟಿದನ್ನು ಸ್ಮರಿಸಬಹುದು. (ಸುಮಾರು 800 ವರ್ಷಗಳ ಹಿಂದೆ ಶ್ರೀ ಹರಳಯ್ಯನವರು ಶಿವಶರಣ ಬಸವಣ್ಣನವರಿಗಾಗಿ ತಯಾರಿಸಿದ ಈ ಪಾದುಕೆಗಳನ್ನು ಕಲಬುರಗಿ ಜಿಲ್ಲೆ ಸೇಡಂ ತಾಲ್ಲೂಕಿನ ಬಿಜನಳ್ಳಿ ಗ್ರಾಮದಲ್ಲಿ ವಿಶೇಷವಾಗಿ ನಿರ್ಮಿಸಿದ ಸಣ್ಣದೇವಾಲಯದಲ್ಲಿ ಇಡಲಾಗಿದೆ.) ಶ್ರೀ ಬಸವಣ್ಣನವರು ಪರಮಶಿವಭಕ್ತರಾದ ಶ್ರೀ ಹರಳಯ್ಯ ದಂಪತಿಗಳಿಂದ ಆ ಪವಿತ್ರ ಪಾದುಕೆಗಳನ್ನು ಪಡೆಯುವುದು ಪರಮ ಅನ್ಯಾಯವೆಂದು ತಿಳಿದು ಅವರಿಗೆ ವಾಪಸ್ಸು ನೀಡಿದರು.

ಶ್ರೀ ಬಸವಣ್ಣನವರು ತಮ್ಮ ತಲೆಯ ಮೇಲೆ ಇಟ್ಟುಕೊಂಡು ವಾಪಸ್ಸು ನೀಡಿದ ಆ ಪವಿತ್ರ ಪಾದುಕೆಗಳನ್ನು ಶ್ರೀ ಹರಳಯ್ಯನವರು ಮನೆಗೆ ತೆಗೆದುಕೊಂಡು ಹೋಗುವಾಗ ಎದುರಾದ ಶ್ರೀ ಮಧುವರಸ ಮತ್ತಿತರರು ಗೇಲಿ ಮಾಡಿದ್ದರಿಂದ ಅವರಿಗೆ ಚರ್ಮದತುರಿಕೆ ಉಂಟಾಗಿ ಪರಿತಪಿಸುವ ಸಂಧರ್ಭ ಬಂದಾಗ ಕೊನೆಗೆ ಶ್ರೀ ಹರಳಯ್ಯನವರ ಮನೆಗೆ ಹೋಗಿ ಪಾದುಕೆಗಳ ಚರ್ಮ ಹದ ಮಾಡಿದ ನೀರನ್ನು ಸಿಂಪಡಿಸಿಕೊಂಡಾಗ ಚರ್ಮತುರಿಕೆಯು ಮಾಯವಾಗಿದ್ದನ್ನು ತಿಳಿಯಬಹುದಾಗಿದೆ. ಅಂದರೆ ಶತಶತಮಾನಗಳಿಂದಲೂ ಚರ್ಮಕೈಗಾರಿಕೆಯನ್ನು ನಡೆಸಿಕೊಂಡು ಬಂದಿದ್ದು ಇದು ಒಂದು ಪವಿತ್ರ ವೃತ್ತಿ ಎಂದು ಪರಿಗಣಿಸಲಾಗಿದೆ. ಇಂದಿಗೂ ಸಹ ಈ ವೃತ್ತಿ ಪ್ರಸ್ತುತವಾಗಿದ್ದು, ಬೃಹದಾಕಾರವಾಗಿ ಬೆಳೆದಿರುತ್ತದೆ.

ಈ ವೃತ್ತಿಯಲ್ಲೂ ಸಹ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಚರ್ಮ ಸುಲಿಯುವ ವೃತ್ತಿ, ಚರ್ಮಹದ ಮಾಡುವ ವೃತ್ತಿ ಮತ್ತು ಪಾದರಕ್ಷೆಗಳನ್ನು ತಯಾರಿಸುವ ವೃತ್ತಿಯನ್ನು ಬೇರೆ ಬೇರೆ ಉಪಜಾತಿಯವರು ನಿರ್ವಹಿಸುತ್ತಿದ್ದು, ಚರ್ಮ ಸುಲಿಯುವವರನ್ನು ಮಾದಿಗ ಎಂದು, ಚರ್ಮ ಹದ ಮಾಡುವವರನ್ನು ಡೋರ ಎಂದು, ಪಾದರಕ್ಷೆ ತಯಾರಿಸುವವರನ್ನು ಸಮಗಾರ/ಮೋಚಿ/ಮಚಗಾರರೆಂದು ಕರೆಯಲಾಗುವುದು. ದಕ್ಷಿಣ ಕರ್ನಾಟಕದಲ್ಲಿ ಮಾದಿಗ ಸಮುದಾಯವೆಂದು ಕರೆಯಲಾಗುವುದು. ಈ ಎಲ್ಲಾ ಉಪಜಾತಿಗಳಿಗೆ ಸೇರಿದವರು ಸಹ ಚರ್ಮ ಕುಶಲಕರ್ಮಿಗಳಾಗಿರುತ್ತಾರೆ. ಈ ವೃತ್ತಿಯು ಶತ ಶತಮಾನಗಳಿಂದ ರೂಢಿಯಲ್ಲಿದ್ದು, ಚರ್ಮೋದ್ಯಮವು ಬೃಹದಾಕಾರವಾಗಿ ಬೆಳೆದು ಭಾರತ ದೇಶದ ಆರ್ಥಿಕ ವ್ಯವಸ್ಥೆಗೆ ಪ್ರಮುಖ ಕೊಡುಗೆ ನೀಡುತ್ತಿದೆ ಹಾಗೂ ರಫ್ತಿನಿಂದ ದೇಶಕ್ಕೆ ಆದಾಯತರುವ ಉದ್ದಿಮೆಗಳಲ್ಲಿ ಚರ್ಮೋದ್ಯಮವು ಪ್ರಮುಖ ಪಾತ್ರ ವಹಿಸುತ್ತಿದೆ. ಈ ಕೈಗಾರಿಕೆಯು ಹೆಚ್ಚಿನ ಉದ್ಯೋಗ ಸೃಷ್ಠಿಸುವಲ್ಲಿ ಸಫಲವಾಗಿದ್ದು, ಸಮಾಜದಲ್ಲಿನ ಅತೀ ಹಿಂದುಳಿದ ವರ್ಗದವರಿಗೆ ಮತ್ತು ಹೆಚ್ಚಿನ ರೀತಿಯಲ್ಲಿ ಮಹಿಳೆಯರಿಗೆ ಉದ್ಯೋಗ ಒದಗಿಸುತ್ತಿದೆ.